ರಾಮರಾವ್, ಬೆನಗಲ್
1876-1943. ಕನ್ನಡ ನವೋದಯ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗಾಗಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದರು. ಕೈಫಿಯುತ್‍ಗಳನ್ನು ಹೆಚ್ಚಾಗಿ ಬರೆದದ್ದರಿಂದ `ಕೈಫಿಯುತ್ ರಾಮರಾಯರು ಎಂದು ಜನಪ್ರಿಯರಾಗಿದ್ದರು. ರಾಮರಾಯರು 1876 ಏಪ್ರಿಲ್ 3 ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮಂಜುನಾಥಯ್ಯನವರು ವಕೀಲರಾಗಿದ್ದರು. ಪ್ರಾಥಮಿಕ ಶಿಕ್ಷಣ ಮುಲ್ಕಿ, ಮಂಗಳೂರು ಮತ್ತು ಪುತ್ತೂರುಗಳಲ್ಲಿ ನಡೆಯಿತು. ಮಂಗಳೂರಿನ ಸರ್ಕಾರಿ ಕಾಲೇಜು ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ, 1896 ರಲ್ಲಿ ಬಿ.ಎ. ಪದವಿ ಗಳಿಸಿದರು. ಮೊದಲಿನಿಂದಲೂ ಕನ್ನಡದ ಬಗ್ಗೆ ಒಲವನ್ನು ಬೆಳಸಿಕೊಂಡು ಇವರು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಮೂರು ವರ್ಷ ಕಾಲ (1897-1900) ಕೆಲಸ ಮಾಡಿದರು. ಆ ಕೆಲಸದಲ್ಲಿ ಇದ್ದಾಗಲೇ ತೆಲಗು ಮತ್ತು ಕನ್ನಡವನ್ನು ಪ್ರಮುಖ ವಿಷಯಗಳನ್ನಾಗಿ ಆರಿಸಿಕೊಂಡು ಅಧ್ಯಯನ ಮಾಡಿ ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆಮೇಲೆ ಮೈಸೂರು ನಾರ್ಮಲ್ ಸ್ಕೂಲ್‍ನಲ್ಲಿ ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಕೆಲಸ ಮಾಡಿದರು. ಅನಂತರ 1902 ರಲ್ಲಿ ಮುಂಬಯಿ ಸರ್ಕಾರದ ಭಾಷಾಂತರ ಶಾಖೆಯಲ್ಲಿ ಭಾಷಾಂತರಕಾರರಾಗಿ ಸುಮಾರು ಎಂಟು ವರ್ಷಗಳ ಕಾಲ ಕೆಲಸ ಮಾಡಿದರು. ಆ ಹುದ್ದೆಯಲ್ಲಿದ್ದಾಗಲೇ ಮುಂಬಯಿ ವಿಶ್ವವಿದ್ಯಾಲಯದ ಎಲ್.ಎಲ್.ಬಿ.ಪರೀಕ್ಷೆಯಲ್ಲಿ ತೇರ್ಗಡೆಯಾದರು (1908). 1910 ರಲ್ಲಿ ಮದರಾಸು ಸಕಾರದ ಭಾಷಾಂತರ ಶಾಖೆಯನ್ನು ಸೇರಿದ ಇವರು 1917 ರಲ್ಲಿ ಆ ಶಾಖೆಯ ಮುಖ್ಯಸ್ಥರಾದರು. ನಿವೃತ್ತಿಯಾಗುವವರೆಗೂ ಅದೇ ಹುದ್ದೆಯಲ್ಲಿದ್ದರು.
ರಾಮರಾಯರದು ಬಹುಮುಖ ಪ್ರತಿಭೆ. ಕನ್ನಡದ ಜೊತೆಗೆ ತೆಲುಗು, ಸಂಸ್ಕøತ, ಬಂಗಾಲಿ, ಮರಾಠಿ ಭಾಷೆಗಳ ಪರಿಚಯ ಪಡೆದಿದ್ದ ಇವರು, ಆ ಭಾಷೆಗಳಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ತೆಲುಗಿನಿಂದ ಕಲಹಪ್ರಿಯಾ ಎಂಬ ನಾಟಕ ಸತ್ಯರಾಜನ ಪೂರ್ವದೇಶದ ಯಾತ್ರೆಗಳು ಎಂಬ ಕಾದಂಬರಿ, ಮರಾಠಿಯಿಂದ ರಮಾಮಾಧವ ಎಂಬ ಕಾದಂಬರಿ, ಸಂಸ್ಕøತದಿಂದ ದೂತಾಂಗ ಎಂಬ ನಾಟಕ ಬಂಗಾಲಿಯಿಂದ ಕೃಷ್ಣಕುಮಾರಿ ಎಂಬ ಕಾದಂಬರಿ-ಈ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇವರ ಸ್ವತಂತ್ರ ಕೃತಿಗಳಿವು: ಇರಾವತಿ, ಚಿಕ್ಕಕತೆಗಳು, ಮಹನೀಯರ ಚರಿತ್ರೆ ಮಾಲೆ. ಇತಿಹಾಸದಲ್ಲೂ ಆಸಕ್ತಿ ವಹಿಸಿದ್ದ ಇವರು ತಂಜಾವೂರು ಮನೆತನದ ಕೈಫಿಯತ್ತು, ಹಳೆಯಬೀಡು ಕೈಫಿಯತ್ತು, ಹೊಳೆಹೊನ್ನೂರು ಕೈಫಿಯತ್ತು-ಈ ಮುಂತಾದ ಅನೇಕ ಕೈಫಿಯತ್ತುಗಳನ್ನು ರಚಿಸಿದ್ದಾರೆ. ಪಾನ್ಯಂ ಸುಂದರಶಾಸ್ತ್ರಿಯವರ ಜೊತೆ ಸೇರಿ ಇವರು ಸಿದ್ಧಪಡಿಸಿದ ಪುರಾಣನಾಮಚೂಡಾಮಣಿ (1941) ಒಂದು ಉತ್ಕøಷ್ಟ ಆಕರಗ್ರಂಥವಾಗಿದೆ.

ಪತ್ರಿಕೋದ್ಯಮ ರಾಮರಾಯರ ಆಸಕ್ತಿಯ ಮತ್ತೊಂದು ಕ್ಷೇತ್ರ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಸುವಾಸಿನಿ ಮಾಸಪತ್ರಿಕೆಗೆ ಎರಡು ವರ್ಷ (1900-1902) ಇವರು ಸಂಪಾದಕರಾಗಿದ್ದರು. ಧಾರವಾಡದಿಂದ ಪ್ರಕಟವಾಗುತ್ತಿದ್ದ ವಾಗ್ಭೂಷಣ ಪತ್ರಿಕೆಯ ಸಹಸಂಪಾದಕರಾಗಿಯೂ ಸ್ವಲ್ಪಕಾಲ ಕೆಲಸ ಮಾಡಿದರು.

ಮದರಾಸು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಏಕೀಕರಣ ಸಂಘದ ಅಧ್ಯಕ್ಷರಾಗಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಕನ್ನಡ ಸಂಘ ಸಂಸ್ಥೆಗಳಲ್ಲೂ ದುಡಿದರು.

ಬೆಳಗಾಂವಿಯಲ್ಲಿ 1925ರಲ್ಲಿ ನಡೆದ ಹನ್ನೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಮರಾಯರನ್ನು ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ಜನತೆ ಗೌರವಿಸಿತು. ಇವರು 1943 ಮೇ 8 ರಂದು ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ